ನೀನೇನಾ..?

ನಿನ್ನ ನೆನಪು..

ನವಿಲು ಗರಿ ತಾಕಿದ ಹಾಗೆ
ರೇಷ್ಮೆಗಿಂತ  ನವಿರು..

ತಂಗಾಳಿ ಬೀಸಿದ ಹಾಗೆ
ಸುಳಿದಷ್ಟೂ ರೋಮಾಂಚನ..

ಸೋನೆ ಮಳೆ ಹನಿಸಿದ ಹಾಗೆ
ಮನಸೆಲ್ಲ ಒದ್ದೆ ಒದ್ದೆ..

ಹಸುಗೂಸಿನ ಮುಗ್ಧ ನಗುವಿನ ಹಾಗೆ
ಕಂಗಳಲ್ಲಿ ನೂರು ದೀಪಾವಳಿ..

ಕಾಡೋ ತುಂಟ ಮುಂಗುರುಳ ಹಾಗೆ
ತಾಕಿದಷ್ಟೂ ಕಾಮನೆಗಳ ಜಾತ್ರೆ..

ಚಂದನದ ಕಂಪಿನ ಹಾಗೆ
ಸುಂದರ ಸಂಜೆಗಳ ಸಂಗಾತಿ..

ಮಲ್ಲಿಗೆಯ ಘಮದ ಹಾಗೆ
ಹೆರಳಿಗೂ ಸ್ಪರ್ಶದ ಕಾತರ..

ಹೂ ಮೈಯ್ಯ ನೇವರಿಸಿದ ಹಾಗೆ
ದುಂಬಿಗೀಗ ಹೊಟ್ಟೆಕಿಚ್ಚು..

ಕಡುಗಪ್ಪು ಕಂಗಳ ಮಿಂಚಿನ ಹಾಗೆ
ಒಂದೆಳೆ ಕಾಡಿಗೆಗೂ ಕೌತುಕ..

ಆ ಕಂಗಳಲ್ಲಿರೋ ಚಿತ್ರ ನಿಂದೇನಾ..??


ಆ ಮಿಂಚಿಗೆ ಕಾರಣ ನೀನೇನಾ..??

ಕನವರಿಕೆ

ನನ್ನದೇ ಬಿಂಬ ತುಂಬಿಕೊಂಡವನ ಕಂಗಳಲ್ಲಿ
ಮೂಡಹತ್ತಿತು 
ಮಸುಕಾದ ಅಪರಿಚಿತ ಚಿತ್ತಾರ..

ಕೂಡಿ ಕಳೆದ ಕ್ಷಣಗಳೆಲ್ಲವ 
ಮಾಸಿದವು
ಅವಳ ಮೆಲುದನಿಯ 
ಉದ್ಗಾರ..

ಅವನ ನಗು ಪ್ರತಿಫಲಿಸಿದ 
ಕಣ್ಣ ಹನಿಗಳಿಂದು 
ಅನಾಥ..
ಆ ನಗುವೇ ಕಾಡಲಿದೆ 
ಇನ್ನೆಂದೂ ಅನವರತ..

ಕಾರಣಗಳು ಹಲವು..
ಸಮಾಜ, ಕಟ್ಟಳೆಗಳು, ನೈತಿಕತೆ, ನಂಬಿಕೆಗಳು..
ಕೊಲೆಯಾಯ್ತು  
ಪರಿಶುದ್ಧ ಒಲವು..

ಹಿಂದೊಮ್ಮೆ ಸಂತಸದ ಹೊನಲ ಸೂಚಿಸಿದ್ದ
ಅಂಗೈ ರೇಖೆಗಳೇ..
ಕಟ್ಟಿಹಾಕಿವೆ ಇಂದು 
ಅಸಹಾಯಕ ಮನವ..

ಸಾವಿರ ಬಣ್ಣದ ರೆಕ್ಕೆಗಳ ಕನಸು ಹೊತ್ತ
ಕೋಶದೊಳಗಿನ 
ಪುಟ್ಟ ಜೀವ 
ಚಿಟ್ಟೆಯಾಗಲೇ ಇಲ್ಲ..!!