ಲೇಖನಿಯೂ... ಮುದ್ದುಮನಸೂ....


"ನನ್ನ ಅಪ್ಪಿ ಹಿಡಿದು ವರುಷವಾಯ್ತು.. ನೆನಪಿದೆಯಾ ಹುಡುಗಿ...?!!"

"..........!"

"ಹೋಗಲಿ ಬಿಡು.., ನಿನ್ನ ಭಾವನಾತಿರೇಕಗಳ ಕುಂಭದ್ರೋಣಕೆ ನಾನು ಕೊಡೆಯಷ್ಟೇ!"

"ಬೇಸರಿಸದಿರು.. ನೀನಲ್ಲದೆ ಇನ್ಯಾರು ನನ್ನ ಆತ್ಮಸಂಗಾತಿ..? ಮನಸಿನಂಗಳದ ತುಂಬಾ ಹರಡಿದ್ದ ಕಹಿ ನೆನಪುಗಳ ಕಳೆ ತೆಗೆದು, ಈಗಷ್ಟೇ ಸಿಹಿ ಕನಸ ನಾಟಿ ಮಾಡಿದ್ದೇನೆ.. ಮುಂಗಾರು ಸನಿಹವಿದೆ.. ನೀನಿಲ್ಲದೆ ಭಾವ ಚಿಗುರೀತು ಹೇಗೆ?!"

"ಅಬ್ಭಾ! ಮುಂಗಾರಲಿ ಮಿಂದು ಯಾವ ಕಾಲವಾಯ್ತು..?! ಈ ಬಾರಿ ಕಡು ನೇರಳೆಯ ಶಾಹಿ ಬೇಕು ನಂಗೆ.. ಈ ಕಪ್ಪು ಬೇಜಾರು..!"

"ನಿನ್ನಿಷ್ಟ... ಮುಂಗಾರು ಹೊತ್ತು ತರೋ ದಿನಗಳಿಗೆ ರಂಗಿನ ತೋರಣ ಕಟ್ಟಲು ತುದಿಗಾಲಲಿ ಕಾಯ್ತಿದ್ದೇನೆ.. ಬಣ್ಣದ ಚಿತ್ತಾರ ನಿನ್ನ ಹಿಡಿಯೋ ಚಿಗುರು ಬೆರಳುಗಳಿಗೂ.. ಹಾಗೇ  ನಿಂಗೂ..!"
ನೀನೇನಾ..?

ನಿನ್ನ ನೆನಪು..

ನವಿಲು ಗರಿ ತಾಕಿದ ಹಾಗೆ
ರೇಷ್ಮೆಗಿಂತ  ನವಿರು..

ತಂಗಾಳಿ ಬೀಸಿದ ಹಾಗೆ
ಸುಳಿದಷ್ಟೂ ರೋಮಾಂಚನ..

ಸೋನೆ ಮಳೆ ಹನಿಸಿದ ಹಾಗೆ
ಮನಸೆಲ್ಲ ಒದ್ದೆ ಒದ್ದೆ..

ಹಸುಗೂಸಿನ ಮುಗ್ಧ ನಗುವಿನ ಹಾಗೆ
ಕಂಗಳಲ್ಲಿ ನೂರು ದೀಪಾವಳಿ..

ಕಾಡೋ ತುಂಟ ಮುಂಗುರುಳ ಹಾಗೆ
ತಾಕಿದಷ್ಟೂ ಕಾಮನೆಗಳ ಜಾತ್ರೆ..

ಚಂದನದ ಕಂಪಿನ ಹಾಗೆ
ಸುಂದರ ಸಂಜೆಗಳ ಸಂಗಾತಿ..

ಮಲ್ಲಿಗೆಯ ಘಮದ ಹಾಗೆ
ಹೆರಳಿಗೂ ಸ್ಪರ್ಶದ ಕಾತರ..

ಹೂ ಮೈಯ್ಯ ನೇವರಿಸಿದ ಹಾಗೆ
ದುಂಬಿಗೀಗ ಹೊಟ್ಟೆಕಿಚ್ಚು..

ಕಡುಗಪ್ಪು ಕಂಗಳ ಮಿಂಚಿನ ಹಾಗೆ
ಒಂದೆಳೆ ಕಾಡಿಗೆಗೂ ಕೌತುಕ..

ಆ ಕಂಗಳಲ್ಲಿರೋ ಚಿತ್ರ ನಿಂದೇನಾ..??


ಆ ಮಿಂಚಿಗೆ ಕಾರಣ ನೀನೇನಾ..??