ಮತ್ತೆ ಬರೆಯುವ ಮನಸಾಗಿದೆ...


ಎಂದಿಗಿಂತ ಮನಸು ತುಂಬ ಪ್ರಫುಲ್ಲ.. ಆಗಷ್ಟೇ ಮಂಜು ಹೊದ್ದು ಮಲಗಿರುವ ಪುಟ್ಟ ಹೂವಿನ ಹಾಗೆ... ಮುದ್ದು ಮಗುವಿನ ಮುಗ್ಧ ನಗುವಿನ ಹಾಗೆ.. :)


ಮೊನ್ನೆಯಷ್ಟೇ ೨೫ ವಸಂತಗಳನ್ನ ಪೂರೈಸಿ ಜೀವನದ ಒಂದು ಹಂತ ಯಶಸ್ವಿಯಾಗಿ ಮುಗಿಸಿದ (ಅಥವಾ ಹಾಗಂದುಕೊಂಡ) ಮುಗುಳ್ನಗೆ ಧರಿಸಿದ ನಾನು ಒಂದು ಸುಂದರವಾದ ಸೂರ್ಯಾಸ್ತಕ್ಕೆ ಸಾಕ್ಷಿಯಾಗುತ್ತಾ ಇದ್ದೆ. ಜೀವನದ ಗಾಡಿ ತಂದು ನಿಲ್ಲಿಸಿರೋದು ನನ್ನ ಸಾಕಷ್ಟು ಮಧುರ ನೆನಪುಗಳ ಹೊತ್ತಿರುವ ನನ್ನ ಮೆಚ್ಚಿನ ನಗರ ಮೈಸೂರಿಗೆ. ಕುಕ್ಕರಳ್ಳಿ ಕೆರೆಯ ತಟದಲ್ಲಿ ಕೂತು ಪ್ರಕೃತಿಯ ಸೊಬಗನ್ನ ಆಸ್ವಾದಿಸುತಿದ್ದ ನಂಗೆ ತಂಗಾಳಿಯ ಅಲೆಗಳಿಗಿಂತ ಹೆಚ್ಚಾಗಿ ಕಾಡುತ್ತಿದ್ದಿದ್ದು ಮನದಲ್ಲಿ ಆಲೋಚನೆಗಳ ಮಹಾಪೂರ. ಒಡಲಲ್ಲಿ ಪುಟ್ಟ ಜೀವವೊಂದು ಎಡೆಬಿಡದೆ ಮಿಸುಕಾಡಿದ ಹಾಗೆ, ಬಿರುಗಾಳಿಯ ರಭಸಕೆ ಎಲೆಯೊಂದು ಥರಗುಟ್ಟಿದ ಹಾಗೆ, ಪಾತರಗಿತ್ತಿಯೊಂದು ತನ್ನ ಕವಚ ಒಡೆದು ಹೊರಬರಲು ತಡಕಾಡುತ್ತಿದ್ದ ಹಾಗೆ..


ಎಂದಿಲ್ಲದ ಖುಷಿ, ಉತ್ಸಾಹ ಇಂದ್ಯಾಕೆ ಅನ್ನೋ ಪ್ರಶ್ನೆ ಮನಸಲ್ಲಿ ಮೂಡಿದ್ದು ನಿಜ. ಕಾರಣಗಳ ಬೆನ್ನಟ್ಟಿ ಹೊರಟ ನಂಗೆ ಸಿಕ್ಕಿದ್ದು ಕೆಲವೇ ಆದರೂ ಮೆಲುಕು ಹಾಕುವಂಥವೇ. ಜೀವನದ ಪ್ರತಿಯೊಂದನ್ನೂ ಹೋರಾಡಿಯೇ ಪಡೆದ ನಂಗೆ, ಸಾಕಷ್ಟು ಅಡೆತಡೆಗಳನ್ನ ಮೆಟ್ಟಿ ನನ್ನ ಬಹು ದಿನಗಳ ಕನಸಾದ ಪದವಿಯನ್ನ ಕಾಲೇಜ್ ಗೇ ಮೊದಲಿಗಳಾಗಿ ನನಸಾಗಿಕೊಂಡ ವಿಜಯದ ಸವಿ, ನನ್ನ ಮೆಚ್ಚಿನ ಊರಿನ ಭಾಗವಾದಂಥಹ ಖುಷಿ, ಈ ಆಲೋಚನೆಗಳ ನಾಗಾಲೋಟಕ್ಕೆ ತಡೆ ಹಾಕಿದ ಇಮೇಲ್ ಸದ್ದು ತನ್ನೊಂದಿಗೆ ಹೊತ್ತು ತಂದ, ನನ್ನ ಪ್ರಪಂಚಕ್ಕೆ ಹೊಸತಾಗಿ ಸೇರಿರುವ ನನ್ನ ತಂಗಿಯ ಮಗನ ಮುದ್ದು ನಗೆ, ತಂಗಾಳಿಯ ಸ್ಪರ್ಶ, ನೀರಿನ ಹಿತವಾದ ಕಂಪನದ ಸದ್ದು, ಎಲ್ಲಕ್ಕಿಂತ ಹೆಚ್ಚಾಗಿ... ಓದಿನ, ಸಾಧನೆಯ, ಭಾವಾವೇಶಗಳ ಭರಾಟೆಯ ನಡುವೆ ಕಳೆದುಹೋಗಿದ್ದ 'ನನ್ನ', ಆ ಸಂಜೆ ನಾನು ಭೇಟಿ ಮಾಡಿದ ಕಾರಣ.. ಮನಸಾಗಿತ್ತು ನಿರಾಳ..! :)


ಬಹಳ ದಿನಗಳ ನಂತರ ನನಗಾಗಿಯೇ ಕಳೆಯುತ್ತಿದ್ದ ಹಿತವಾದ ಸಂಜೆ ಅದು.. ಆದರೂ ಮತ್ತಿನ್ನೆನ್ನನ್ನೋ ಹುಡುಕುತ್ತಿತ್ತು ಮನಸು.. ಬಹಳ ಹೊತ್ತು ಅದನ್ನ ಹುಡುಕಿ ಸೋತ ನಂಗೆ ದೂರದಲ್ಲಿ ಕಂಡಿದ್ದು ಬೆಂಚೊಂದರಲ್ಲಿ ಕುಳಿತು ಪ್ರಕೃತಿಯ ಸೌಂದರ್ಯವನ್ನ ಹಾಳೆಯೊಂದರಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತಿದ್ದ ಹುಡುಗ. ಅವನ ತನ್ಮಯತೆ, ಹಾಳೆಯ ಮೇಲೆ ಬೆರಳಾಡಿಸುತ್ತಿದ್ದ ರೀತಿ ಗಮನಿಸುತ್ತ ನಿಂತ ನನ್ನ, ತಂಗಾಳಿಯ ಅಲೆಯೊಂದು ಹಾದು ಹೋಯ್ತು.. ಥಟ್ ಅಂತ ಏನೋ ಹೊಳೆದ ಹಾಗಾಯ್ತು.. ಬಹುಶಃ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು... ಎರಡನೆಯ ಯೋಚನೆ ಇಲ್ಲದೇ ಹೇಳಿತ್ತು ಒಳ ದನಿ..


'ಮತ್ತೆ ಬರೆಯುವ ಮನಸಾಗಿದೆ..'


ಹಾಗಂತ ನನಗೇ ಕೇಳಿಸುವಂತೆ ಮತ್ತೊಮ್ಮೆ ಹೇಳಿಕೊಂಡು ಹೊಸತೊಂದು ಹುರುಪಿನೊಂದಿಗೆ ನನ್ನ ಹೊಸ ಗೆಳಯ Pleasure ನತ್ತ ಹೆಜ್ಜೆ ಹಾಕಿದೆ.. :)