ಗುಪ್ತ ಗಾಮಿನಿ


ಇಲ್ಲ ಕಣೋ ಹುಡುಗಾ,
ಇನ್ನಷ್ಟು ದಿನ ಹೇಳುವುದಿಲ್ಲ..
ನಿನ್ನೊಲವಿನ ಬಿಸಿ ತಟ್ಟಿದರೂ,
ನಾ ಮಾತ್ರ ಹೀಗೇ...
ಏನೂ ಗೊತ್ತಿಲ್ಲದ ಹಾಗೆ..
ಒಳಗೊಳಗೇ,
ಮನಸಿನಂಗಳದಲ್ಲಿ,
ಎದೆಬಿಚ್ಚಿ ಮಾತಾಡುತ್ತಿರುತ್ತೇನೆ..
ಹೇಳಲೋ.... ಬೇಡವೋ....

ವಕಾಲತ್ತುಗಳ ನಡುವೆ
ಕಾದಾಡುತ್ತಿರುತ್ತೇನೆ..
ಅದೆಷ್ಟು ಆಮಿಷಗಳ ಮೆಟ್ಟಿ
ನನ್ನೊಟ್ಟಿಗಿರುತ್ತದೋ
ನಿನ್ನ ಮನ?
ಕಾದು ನೋಡುತ್ತೇನೆ..


ಕಾಯಬೇಕಾ ಕಣೋ ಹುಡುಗಾ,
ಕಾದಷ್ಟು....
ನಮ್ಮೊಳಗಿನ ಹುಸಿ ಬಯಲಾಗಬೇಕು,
ಭ್ರಮೆ ಬೆತ್ತಲಾಗಬೇಕು,
ಪೊರೆ ಹರೆಯಬೇಕು..


ಇಲ್ಲ ಕಣೋ ಹುಡುಗಾ,
ಇನ್ನಷ್ಟು ದಿನ ಹೇಳುವುದಿಲ್ಲ..


ನನ್ನ ಮೌನವ ಆಲಿಸು,
ಅದು ಒಲವ ಹಾಡುತ್ತದೆ..
ಮುಗಿಲಿನಾಚೆಯ ಮಾತುಗಳ
ಪಿಸುಗುಡುತ್ತದೆ..
ನಿನ್ನ ದನಿ ಇಲ್ಲದ ಹಾಡಿಗೆ
ದನಿಗೂಡುತ್ತದೆ..
ಹನಿಗೂಡುತ್ತದೆ..
ಹಾಡತೊಡಗಿದರೊಮ್ಮೆ
ವರ್ಷಧಾರೆಯಾಗಿ ತಂಪನೆರೆಯುತ್ತದೆ..


ಇಲ್ಲ ಕಣೋ ಹುಡುಗಾ,
ಇನ್ನಷ್ಟು ದಿನ ಹೇಳುವುದಿಲ್ಲ..


ನಿನ್ನೊಳಗಿನ ಒಲವಿನ ಬಳ್ಳಿ ಚಿಗುರಲಿ,
ನನ್ನೊಳಗೂ ಟಿಸಿಲೊಡೆಯುತ್ತದೆ..
ಹಾದಿಗುಂಟ ಮುಳ್ಳು ಕಂಟಿಗಳ ದಾಟಿ,
ಮುಂದೊಂದು ದಿನ ಬೆಸೆಯುತ್ತದೆ..

ಅಲ್ಲಿಯವರೆಗೂ.....
ನಾ ಮಾತ್ರ ಹೀಗೇ....
ಏನೂ ಗೊತ್ತಿಲ್ಲದ ಹಾಗೆ....
ಮನಸಿನಂಗಳದಲ್ಲಿ ಎದೆಬಿಚ್ಚಿ ಮಾತಾಡುತ್ತಿರುತ್ತೇನೆ....
ಹೇಳಲೋ.... ಬೇಡವೋ....

3 ಕಾಮೆಂಟ್‌ಗಳು:

  1. ಎಂಥ ಸುಂದರ ಕವನ,
    ಹೇಳಲೋ ಬೇಡವೋ ಎಂಬ ನಿಮ್ಮ ತುಮುಲ
    ನಿಜವಾಗಿ ಮೂಡಿ ಬಂದಿದೆ
    ಅದರಲ್ಲೋ ಕೆಳಗಿನ

    ವಕಾಲತ್ತುಗಳ ನಡುವೆ
    ಕಾದಾಡುತ್ತಿರುತ್ತೇನೆ..
    ಅದೆಷ್ಟು ಆಮಿಷಗಳ ಮೆಟ್ಟಿ
    ನನ್ನೊಟ್ಟಿಗಿರುತ್ತದೋ
    ನಿನ್ನ ಮನ?
    ಕಾದು ನೋಡುತ್ತೇನೆ..

    ಸಾಲುಗಳಂತೂ ಸೂಪರ್

    ಪ್ರತ್ಯುತ್ತರಅಳಿಸಿ
  2. SAAGARAADECHAYA INCHARADA GURANNA HELIDANTE TUMBA CHENNAGIDE.KEEP IT UP.YAAVA SAALOO KADIME ILLA.ELLAVOO CHENDA CHENDA:)

    ಪ್ರತ್ಯುತ್ತರಅಳಿಸಿ
  3. ಗೌತಮ್ ಹಾಗು ಗುರುರವರಿಗೆ ಧನ್ಯವಾದಗಳು.. ಹುಚ್ಚು ಖೋಡಿ ವಯಸ್ಸಿನ ಕದ ತಟ್ಟುತ್ತಿದ್ದಾಗಿನ ಸಮಯದಲ್ಲಿ ಜನ್ಮತಳೆದ ಸಾಲುಗಳು!

    ಪ್ರತ್ಯುತ್ತರಅಳಿಸಿ